ನೂತ್ನ ನಾಗಚಂದ್ರ
	ಸು. 1650ರಲ್ಲಿದ್ದ ಜೈನಕವಿ. ಜಿನಮುನಿತನಯ ಎಂಬುದು ಈತನ ಕೃತಿ. ಅಭಿನವಪಂಪನೆಂದು ಪ್ರಸಿದ್ಧನಾದ ನಾಗಚಂದ್ರನಿಗೆ ತಾನು ಎರಡನೆಯವ ಎಂಬ ಭಾವದಿಂದ ನೂತ್ನ ನಾಗಚಂದ್ರ ಎಂದು ಹೆಸರಿಟ್ಟುಕೊಂಡಂತೆ ಕಂಡುಬರುತ್ತದೆ. ಈತನ ಕೃತಿ ನೂರು ಕಂದಪದ್ಯಗಳಿರುವ ಶತಕ. ಪದ್ಯಗಳೆಲ್ಲ ಬಿಡಿಬಿಡಿಯಾದ ಮುಕ್ತಕಗಳು. ಪ್ರತಿಯೊಂದು ಕಂದವೂ ಜೀಮುನಿತನಯ ಎಂದು ಕೊನೆಯಾಗುತ್ತದೆ. ಜೈನ ಧರ್ಮದ ತತ್ತ್ವಗಳನ್ನು ಕವಿ ಸರಳವಾದ ಭಾಷೆಯಲ್ಲಿ ಹೇಳಿದ್ದಾನೆ. ಜೊತೆಗೆ ಸಾಮಾಜಿಕವೂ ನೀತಿ ಬೋಧಕವೂ ಆದ ಅನೇಕ ವಿಚಾರಗಳೂ ಇಲ್ಲಿ ಬಂದಿವೆ.

	ಈತ ಹೊಸದಾಗಿ ಏನನ್ನೂ ಹೇಳಿಲ್ಲ. ಹಿಂದಿನವರು ಹೇಳಿದ ವಿಚಾರಗಳನ್ನೇ ಕಂದಪದ್ಯಗಳಲ್ಲಿ ಸರಳವಾಗಿ, ಅಚ್ಚುಕಟ್ಟಾಗಿ ಹೇಳಿದ್ದಾನೆ. ಕವಿಯ ಉದ್ದೇಶವಾದರೂ ಸೀಮಿತವಾಗಿರುವುದರಿಂದ ಈ ಮುಕ್ತಕಗಳು ಅವುಗಳ ಮಿತಿಯಲ್ಲಿ ಗೆಲುವಾಗಿವೆ ಎಂದು ಹೇಳಬಹುದು.										   (ಎಸ್.ಎಚ್.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ